ಗ್ಲಟನ್-
ಕಾರ್ನಿವೊರ ಗಣದ ಮಸ್ಟೆಲಿಡೀ ಕುಟುಂಬಕ್ಕೆ ಸೇರಿದ ಒಂದು ಮಾಂಸಾಹಾರಿ ಸ್ತನಿ. ವಲ್ವರೈನ್ ಪರ್ಯಾಯನಾಮ. ಗ್ಯೂಲೊ ಗ್ಯೂಲೊ ಇದರ ಶಾಸ್ತ್ರೀಯ ನಾಮ. ಕೆನಡ, ಅರ್ಕ್‍ಟಿಕ್ ಪ್ರದೇಶದ ದ್ವೀಪಗಳು, ಅಮೆರಿಕ ಸಂಯುಕ್ತ ಸಂಸ್ಥಾನದ ಕ್ಯಾಲಿಫೋರ್ನಿಯ, ಕೊಲೊರಾಡೊ ರಾಜ್ಯಗಳಲ್ಲಿ ಕಾಣಬರುತ್ತದೆ. ಗ್ಲಟನ್ ಚಿಕ್ ಗಾತ್ರದ ಪ್ರಾಣಯಾದರೂ (ಇದರ ಉದ್ದ 2' - 3', ಎತ್ತರ ಸುಮಾರು 11/2) ಬಹಳ ಬಲಿಷ್ಠವಾದ್ದು. ಇದರ ಸರಾಸರಿ ತೂಕ ಸುಮಾರು 15 - 17.5 ಕಿ.ಗ್ರಾಂ. ಕಾಲುಗಳು ಮೋಟು. ಪಾದಗಳು ಮಾತ್ರ ಅಗಲವಾಗಿವೆ. ಒಂದೊಂದರಲ್ಲೂ ಬಲು ಚೂಪಾದ ಮತ್ತು ಬಾಗಿದ ನಖಗಳುಳ್ಳ 5 ಬೆರಳುಗಳಿವೆ. ದೇಹವೆಲ್ಲ ಕಪ್ಪು ಮಿಶ್ರಿತ ಕಂದು ಬಣ್ಣದ ದಟ್ಟ ತುಪ್ಪುಳಿನಿಂದ ಆವೃತವಾಗಿದೆ. ದೇಹದ ಅಕ್ಕಪಕ್ಕಗಳಲ್ಲಿ ಭುಜದಿಂದ ಪೃಷ್ಠದವರೆಗೆ ತಿಳಿ ಕಂದು ಬಣ್ಣದ ಪಟ್ಟೆಗಳಿವೆ. ಗುದದ್ವಾರದ ಬಳಿ ದುರ್ಗಂಧಪೂರಿತವಾದ ಮತ್ತು ಹಳದಿ ಬಣ್ಣದ ದ್ರವವನ್ನು ಸ್ರವಿಸುವ ಗ್ರಂಥಿಗಳಿವೆ.

ಗ್ಲಟನ್ ಏಕಾಂತಜೀವಿ. ಪ್ರತಿ ಪ್ರಾಣಿಯೂ ತನ್ನದೇ ಆದ ಅಧೀನ ಪ್ರಾಂತ್ಯವೊಂದನ್ನು ಗುರುತಿಸಿಕೊಂಡು ಅದರೊಳಗೇ ಕಾಲ ಕಳೆಯುತ್ತದೆ. ಸಾಮಾನ್ಯವಾಗಿ ಇದರ ಚಟುವಟಿಕೆಯೆಲ್ಲ ಭೂಮಿಯ ಮೇಲೆಯೇ ಇದ್ದರೂ ಕೆಲವೊಮ್ಮೆ ಮರಗಳನ್ನೇರುವುದೂ ಉಂಟು. ಇದು ತನ್ನ ಹೊಟ್ಟೆಬಾಕತನಕ್ಕೆ ಹೆಸರುವಾಸಿ (ಇದರಿಂದಲೇ ಇದಕ್ಕೆ ಗ್ಲಟನ್ ಎಂಬ ಹೆಸರು ಬಂದಿದೆ). ಇದು ಸಣ್ಣಪುಟ್ಟ ಸ್ತನಿಗಳು, ಹಕ್ಕಿಗಳು ಮತ್ತು ಅವುಗಳ ಮೊಟ್ಟೆಗಳು, ಸತ್ತ ಪ್ರಾಣಿಗಳು ಮುಂತಾದವನ್ನೆಲ್ಲ ತಿನ್ನುತ್ತದೆ. ಕಾಯಿ, ಬೀಜಗಳನ್ನೂ ತಿನ್ನುವುದುಂಟು. ಕೆಲವು ಸಲ ಬೇಟೆಗಾರರು ಬೇರೆ ಪ್ರಾಣಿಗಳನ್ನು ಹಿಡಿಯಲೆಂದು ಒಡ್ಡಿದ ಬಲೆಗಳನ್ನು ಕೊಳ್ಳೆ ಹೊಡೆದು ಅದರಲ್ಲಿ ಸಿಕ್ಕಿಕೊಂಡಿರಬಹುದಾದ ಪ್ರಾಣಿಗಳನ್ನು ತಿನ್ನುತ್ತದೆ. ಇದು ಬಹಳ ಸೂಕ್ಷ್ಮ, ಜಾಗರೂಕ ಹಾಗೂ ಕಪಟಿ. ವಿವಿಧ ಬಗೆಯ ವಸ್ತುಗಳನ್ನು ಕದಿಯುವುದರ ಜೊತೆಗೆ ಅವನ್ನು ಬಚ್ಚಿಡುವ ಸ್ವಭಾವವೂ ಇದಕ್ಕಿದೆ. ತನ್ನ ಗಾತ್ರಕ್ಕಿಂತ ಹೆಚ್ಚು ದೊಡ್ಡದಾದ ಹಾಗೂ ಶಕ್ತಿಯುತವಾದ ಪ್ರಾಣಿಗಳನ್ನು ಎದುರಿಸಿ ಸೆಣಸುವುದುಂಟು.

ಇದರ ಸಂತಾನಾಭಿವೃದ್ಧಿಯ ಕಾಲ ಮಾರ್ಚ್ ತಿಂಗಳು. ಗರ್ಭಧರಿಸಿದ ಹೆಣ್ಣು ಗಂಡಿನಿಂದ ಬೇರೆ ಹೋಗಿ ಮರದ ಪೊಟರೆಯಲ್ಲಿ ಇಲ್ಲವೆ ಬಂಡೆಯ ಪೊಳ್ಳಿನಲ್ಲಿ ತನ್ನದೇ ಆದ ನೆಲೆಯನ್ನು ಸ್ಥಾಪಿಸಿಕೊಳ್ಳುತ್ತದೆ. ಸುಮಾರು 9 ವಾರಗಳ ಅನಂತರ 4 -- 5 ಮರಿಗಳನ್ನು ಹಾಕುತ್ತದೆ. ಮರಿಗಳು ಸುಮಾರು 2 ವರ್ಷಗಳ ಕಾಲ ತಾಯೊಂದಿಗೇ ಇದ್ದು ಆಮೇಲೆ ಬೇರೆ ಹೋಗುತ್ತದೆ.  

ಗ್ಲಟನನ್ನು ಅದರ ತುಪ್ಪುಳಕ್ಕಾಗಿ ಬೇಟೆಯಾಡುವುದಿದೆ. ಸೀಲ್, ವೀಸಲ್, ಮಿಂಕ್ ಮುಂತಾದವುಗಳ ತುಪ್ಪಳಕ್ಕಿರುವಷ್ಟು ಬೇಡಿಕೆ ಇದಕ್ಕಿಲ್ಲವಾದರೂ ಗ್ಲಟನ್ನಿನ ತುಪ್ಪುಳ ಎಂಥ ಕಡುಚಳಿಯಲ್ಲೂ ಹೆಪ್ಪುಗಟ್ಟದೆ, ಕೆಡದೆ ಇರುವುದರಿಂದ ಉತ್ತರ ಮೇರು ಪ್ರದೇಶಗಳಲ್ಲಿ ಉಪಯುಕ್ತವೆನಿಸಿದೆ.
(ಕೆ.ಪಿ.ಆರ್.)
(ಪಿ.ಆರ್.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ